ಕೃತದ್ಯುತಿ

ಅಂಗರಾಜನ ಮಗಳು, ಶೂರಸೇನ ಮಹಾರಾಜ ಚಿತ್ರಕೇತುವಿನ ನೆಚ್ಚಿನ ರಾಣಿ. ಅನೇಕ ರಾಣಿಯರಿದ್ದ ಚಿತ್ರಕೇತುವಿಗೆ ಪುತ್ರಸಂತಾನ ಪ್ರಾಪ್ತಿಯಿಲ್ಲದೆ ಚಿಂತಾಕ್ರಾಂತನಾಗಿರಲು ಒಮ್ಮೆ ಅಂಗಿರಸ ಮಹರ್ಷಿ ಇವನ ಆಸ್ಥಾನಕ್ಕೆ ಬಂದು ಈತನ ಚಿಂತೆಯನ್ನರಿತು ಪುತ್ರಪ್ರಾಪ್ತಿಗಾಗಿ ಆದಿತ್ಯೇಷ್ಟಿಯನ್ನು ಕೈಗೊಳ್ಳುವಂತೆ ಉಪದೇಶಿಸಿದೆ. ಯಾಗಾಂತ್ಯದಲ್ಲಿ ಮಂತ್ರಪೂತವಾದ ಚರುಶೇಷವನ್ನು ರಾಜ್ಯ ತನ್ನ ಪ್ರಿಯರಾಣಿ ಕೃತದ್ಯುತಿಗೆ ಕೊಡಲು ಆಕೆ ಗರ್ಭವತಿಯಾಗಿ ದಿವ್ಯತೇಜೋರೂಪಿಯಾದ ಕುಮಾರನಿಗೆ ಜನ್ಮವಿತ್ತಳು. ಇದರಿಂದ ಅರಸನಿಗೆ ಈಕೆಯಲ್ಲಿ ಪ್ರೀತ್ಯಾದರಗಳು ಹೆಚ್ಚಿದುವಾದರೂ ಉಳಿದ ಪತ್ನಿಯರ ದ್ವೇಷಾಸೂಯೆಗಳಿಗೆ ಈಕೆ ಪಾತ್ರಳಾಗಬೇಕಾಯಿತು. ಉಪಾಯಾಂತರದಿಂದ ಅವರು ವಿಷಪ್ರಾಶನಮಾಡಿಸಿ ಈಕೆಯ ಮಗುವನ್ನು ಕೊಂದರು. ಇದರಿಂದ ಪರಮದುಃಖಿತನಾದ ಚಿತ್ರಕೇತು ಕೊರಗುತ್ತಿರಲು ನಾರದಮಹರ್ಷಿಗಳು ಒಮ್ಮೆ ಅವನ ಆಸ್ಥಾನಕ್ಕೆ ಬಂದು ಲೌಕಿಕ ಸುಖಗಳ ನಶ್ವರತೆಯನ್ನು ತಿಳಿಸಿ, ಸಮಾಧಾನಪಡಿಸಿ ವೈರಾಗ್ಯವನ್ನವಲಂಬಿಸುವಂತೆ ಉಪದೇಶಿಸಿದರು.

ಚಿತ್ರಕೇತು ನಾರದರ ಉಪದೇಶವನ್ನು ಪಾಲಿಸಿ ತಪೋನಿರತನಾಗಿ ಸಿದ್ಧಿಯನ್ನು ಪಡೆದ. ಒಂದು ಸಾರಿ ಈತ ಕೈಲಾಸದಲ್ಲಿ ಪಾರ್ವತೀ ಸಹಿತನಾದ ಶಿವನನ್ನು ನೋಡಿ ಆಕ್ಷೇಪಿಸಿದ. ಅವಮಾನಿತಳಾದ ಶಿವೆ ಖತಿಗೊಂಡು ರಾಕ್ಷಸಜನ್ಮವೆತ್ತುವಂತೆ ಈತನಿಗೆ ಶಾಪವಿತ್ತಳು. ಚಿತ್ರಕೇತು ವೃತ್ರಾಸುರನಾಗಿ ಹುಟ್ಟಬೇಕಾಯಿತು.            				(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ